ಬರೈಟಿಸ್
ಬೇರಿಯಮ್ ಮತ್ತು ಸಲ್ಫ್ಯೂರಿಕ್ ಆಮ್ಲದಿಂದ ಕೂಡಿದ ಲವಣ. ಇದೊಂದು ಭಾರವಾದ ಖನಿಜ. ಇದರ ಸಾಪೇಕ್ಷ ಸಾಂದ್ರತೆ 4.3-4.6. ಆರ್ಥೊರಾಂಬಿಕ್ ಹರಳುಗಳ ಶ್ರೇಣಿಯದು. ಇದರ ಹರಳುಗಳು ಸಾಮಾನ್ಯವಾಗಿ ಚಪ್ಪಟೆ ಇಲ್ಲವೇ ಉಂಡೆಯ ಅಥವಾ ಕಣಗಳ ಅಥವಾ ನಾರಿನ ರೂಪದಲ್ಲಿಯೂ ಇರುವುದುಂಟು. ಹರಳು ಮತ್ತು ಚಪ್ಪಟೆ ಪದರಗಳ ಉತ್ಕøಷ್ಟ ಸೀಳಿಕೆ ಇರುವುದರಿಂದ ಅನೇಕ ವೇಳೆ ಇದನ್ನು ಬಲು ತೆಳುವಾದ ಚೂರುಗಳಾಗಿ ವಿಂಗಡಿಸುವುದು ಸಾಧ್ಯ. ಬಣ್ಣ ಶುದ್ಧ ಬಿಳುಪಾಗಿದ್ದು, ಅಪರಿಶುದ್ಧತೆಯಿಂದಾಗಿ ಕಂದು, ಕೆಂಪು ಅಥವಾ ಹಳದಿಯ ಛಾಯೆಯನ್ನು ಹೊಂದಿರುವುದುಂಟು. ಶುದ್ಧ ಖನಿಜ ಪಾರದರ್ಶಕವಾಗಿರುವುದು. ಕಾಠಿಣ್ಯಾಂಕ 2.5-5.5. ಚಾಕುವಿನ ಮೊನೆಯಿಂದ ಸುಲಭವಾಗಿ ಗೀರಬಹುದು. ಒರೆಯ ಬಣ್ಣ ಬಿಳುಪು. ಬೇರಿಯಮ್ ಲೋಹದಿಂದ ಕೂಡಿದ ಮುಖ್ಯ ಖನಿಜವಿದು. ಅಲ್ಲದೇ ರಾಸಾಯನಿಕವಾಗಿ ಜಡವಸ್ತು. ಹೀಗಾಗಿ ಇದನ್ನು ಅನೇಕ ಕೈಗಾರಿಕೆಗಳಲ್ಲಿ ಬಳಸಲಾಗುವುದು. ಕುಟ್ಟಿ ಪುಡಿ ಮಾಡಿದ ಬರೈಟಿಸನ್ನು ದ್ರವಬಣ್ಣಗಳಲ್ಲಿ ಉಪಯೋಗಿಸುವರು. ಅಲ್ಲದೆ ಕಾಗದ ಮತ್ತು ಬಟ್ಟೆಗಳ ತಯಾರಿಕೆಯಲ್ಲಿ ಬಿಳುಪನ್ನೂ ಹೊಳಪನ್ನೂ ಕೊಡಬಲ್ಲ ಮತ್ತು ಸಣ್ಣಸಣ್ಣ ರಂಧ್ರಗಳನ್ನು ತುಂಬಬಲ್ಲ ಪದಾರ್ಥವಾಗಿ ಬಳಸುತ್ತಾರೆ. ರಬ್ಬರ್ ತಯಾರಿಕೆಯಲ್ಲಿ ಪೂರಕವಸ್ತುವಾಗಿ ಇದರ ಉಪಯೋಗ ಉಂಟು.

	ಕೊಳವೆ ಬಾವಿಗಳನ್ನು ತೋಡಲು ಬೇಕಾಗುವ ಬೈರಿಗೆ ಮಡ್ಡಿಯ (ಡ್ರಿಲ್ಲಿಂಗ್ ಮಡ್) ತಯಾರಿಕೆಯಲ್ಲಿ ಇದಕ್ಕೆ ತುಂಬ ಉಪಯೋಗ ಉಂಟು. ಕಲ್ಲಿದ್ದಲನ್ನು ತೊಳೆಯುವ ಕಾರ್ಖಾನೆಗಳಲ್ಲಿ ಭಾರವಾಹಕವಾಗಿಯೂ ಇದರ ಬಳಕೆ ಇದೆ. ಅಲ್ಲದೆ ಹಿತ್ತಾಳೆಯನ್ನು ಕರಗಿಸುವಾಗ ಸ್ರಾವಕ ವಸ್ತುವಾಗಿ ಮತ್ತು ತಾಮ್ರದ ತಯಾರಿಕೆಯಲ್ಲಿ ಶುದ್ಧೀಕರಿಸುವ ವಸ್ತುವಾಗಿ ಕೂಡ ಬರೈಟಿಸನ್ನು ಬಳಸುತ್ತಾರೆ. ಇದರಿಂದ ತಯಾರಾದ ಇತರ ರಾಸಾಯನಿಕ ವಸ್ತುಗಳು ಅನೇಕ ವಿಧಗಳಲ್ಲಿ ಉಪಯುಕ್ತವಾಗಿವೆ. ಎಕ್ಸ್‍ಕಿರಣ ಮತ್ತು ವೈದ್ಯಕೀಯ ಚಿಕಿತ್ಸೆಗಳಲ್ಲಿ ಬರೈಟಿಸಿನಿಂದ ತಯಾರಾದ ವಿವಿಧ ಲವಣಗಳನ್ನು ಉಪಯೋಗಿಸುತ್ತಾರೆ. ಬೇರಿಯಮ್ ಕಾರ್ಬೊನೇಟನ್ನು ಪಿಂಗಾಣಿ ಉದ್ಯಮದಲ್ಲಿ ಬಳಸುತ್ತಾರೆ. ಬರೈಟಿಸ್ ಖನಿಜ ವಿವಿಧ ಶಿಲೆಗಳಲ್ಲಿ ಸ್ತರಪಲ್ಲಟದಿಂದ ಉಂಟಾದ ಬಿರುಕುಗಳಲ್ಲಿಯೂ ಇತರ ಸಂದುಗಳಲ್ಲಿಯೂ ಸಿರಗಳ ರೂಪದಲ್ಲಿ ಸಾಮಾನ್ಯವಾಗಿ ದೊರೆಯುತ್ತದೆ. ಅಲ್ಲದೆ ಸುಣ್ಣಕಲ್ಲುಗಳ ಸ್ತೋಮಗಳಲ್ಲಿ, ಸುಣ್ಣಕಲ್ಲಿನ ಕಣಗಳನ್ನು ಪಲ್ಲಟಗೊಳಿಸಿ ಪದರಗಳಾಗಿಯೂ ಇರುವುದುಂಟು. ಅನೇಕ ವೇಳೆ ಸಿರಗಳಲ್ಲಿ ಇತರ ಖನಿಜಗಳೊಂದಿಗೆ ಬೆಣಚು ಕಲ್ಲಿನ ಜೊತೆಯಲ್ಲಿ ಗ್ಯಾಂಗ್ ರೂಪದಲ್ಲಿರುವುದುಂಟು.

	ಬರೈಟಿಸಿನ ನಿಕ್ಷೇಪಗಳು ಸಾಮಾನ್ಯವಾಗಿ ಎಲ್ಲ ದೇಶಗಳಲ್ಲಿಯೂ ಒಂದಲ್ಲ ಒಂದು ವಿಧದಲ್ಲಿ ದೊರೆಯುತ್ತವೆ. ಭಾರತದಲ್ಲಿ ಇದರ ನಿಕ್ಷೇಪಗಳು ಆಂಧ್ರಪ್ರದೇಶದ ಕಡಪ, ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳಲ್ಲಿವೆ. ಇಲ್ಲಿ ಇವು ಕಡಪ ಶಿಲಾಸ್ತೋಮದ ವೇಮಪಲ್ಲಿ ಸುಣ್ಣ ಶಿಲಾ ಸಮುದಾಯದಲ್ಲಿಯ ಬಿರುಕುಗಳಲ್ಲಿ ಸಿರಗಳಾಗಿ ಇಲ್ಲವೆ ಪದರಗಳಾಗಿ ದೊರೆಯುತ್ತವೆ. ಈಚೆಗೆ ಭಾರತದ ಭೂ ಸಂಶೋಧನ ಇಲಾಖೆ ಕಡಪ ಜಿಲ್ಲೆಯ ಮಂಗಮ್ಮಪೇಟೆಯ ಬಳಿ ಪದರಗಳ ರೂಪದಲ್ಲಿರುವ ಬಲು ದೊಡ್ಡ ನಿಕ್ಷೇಪವನ್ನು ಗುರುತಿಸಿದೆ. ಇದರಿಂದಾಗಿ ಭಾರತದಲ್ಲಿ ಬರೈಟಿಸಿನ ಕೊರತೆ ಬಲುಮಟ್ಟಿಗೆ ಪೂರೈಸುವ ನಿರೀಕ್ಷೆಯಿದೆ. ಈ ವಿಪುಲ ನಿಕ್ಷೇಪದ ಉತ್ಪತ್ತಿ ಒಂದು ಸೋಜಿಗವೆಂದು ಅಭಿಪ್ರಾಯಪಡಲಾಗಿದೆ. ಅಲ್ಲದೆ ಬರೈಟಿಸಿನ ನಿಕ್ಷೇಪಗಳು ರಾಜಸ್ಥಾನದ ಕಲ್ನಾರಿನ ಗಣಿಗಳಲ್ಲಿಯೂ ಬಿಹಾರ್, ಹಿಮಾಚಲ ಪ್ರದೇಶ ಮತ್ತು ತಮಿಳು ನಾಡಿನ ಸೇಲಂ ಜಿಲ್ಲೆಯಲ್ಲೂ ಇವೆ.
(ಎಂ.ಎಸ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ